ಟರ್ಟೀಯಸ್
	ಕ್ರಿ.ಪೂ.ಸು. 650. ಪ್ರಾಚೀನ ಗ್ರೀಕ್ ಕವಿ. ಈತ ಹುಟ್ಟಿದ ವರ್ಷವಾಗಲಿ ಸತ್ತ ವರ್ಷವಾಗಲಿ ತಿಳಿದು ಬಂದಿಲ್ಲ. ಹುಟ್ಟಿದ ಸ್ಥಳ ಆಥೆನ್ಸ್ ಇರಬಹುದು ಇಲ್ಲವೆ ಮಿಲೆನೀಸಿಯಾದ ಯಾವುದಾದರೊಂದು ಊರು ಇರಬಹುದು. 

	ಈತ ಸ್ಪಾರ್ಟಕ್ಕೆ ಹೋಗಿ ನೆಲಸಿದ ಬಗ್ಗೆ ಒಂದು ಸ್ವಾರಸ್ಯವಾದ ಕತೆ ಇದೆ. ಸ್ಪಾರ್ಟಾದವರು ಎರಡನೆಯ ಮೆಸ್ಸೆನಿಯನ್ ಯುದ್ಧವನ್ನೆದುರಿಸಬೇಕಾದ ಸಂಕಟ ಪರಿಸ್ಥಿತಿ ಒದಗಿದಾಗ ಡೆಲ್ಫಿಯ ದೈವವಾಣಿಯಂತೆ ಆಥೆನ್ಸಿನವರು ತಮ್ಮಲ್ಲಿ ಒಬ್ಬನನ್ನು ಸ್ಪಾರ್ಟದವರ್ನು ಹುರಿದುಂಬಿಸಿ ಅವರಿಗೆ ಮಾರ್ಗದರ್ಶನ ನೀಡಲು ಕಳಿಸಬೇಕೆಂದು ಆದೇಶವಿತ್ತರಂತೆ. ತಮಗೆ ಇಷ್ಟವಿಲ್ಲದಿದ್ದರೂ ಅಪೊಲೊ ದೇವರ ಕೋಪಕ್ಕೆ ಹೆದರಿಯೊ ಅವನ ಮೇಲಿನ ಭಕ್ತಿಗೊ ಟರ್ಟೀಯಸ್‍ನನ್ನು ಆಥೆನ್ಸಿನವರು ಆರಿಸಿ ಕಳಿಸಿದರಂತೆ. ಮಿಲೆನೀಸಿಯಾದಲ್ಲಿ ಕುಂಟ ಉಪಾಧ್ಯಾಯನೆಂದು ಹೆಸರಾಗಿದ್ದ ಟರ್ಟೀಯಸ್‍ನಲ್ಲಿ ಕಾವ್ಯದ ಪ್ರತಿಭೆ ಹೋಗಲಿ ಅದರ ಗಂಧವೂ ಇರಲಿಲ್ಲವಂತೆ. ಅಪೊಲೊ ದೇವರ ಮಹಿಮೆಯಿಂದ ಆತ ಸ್ಪಾರ್ಟಕ್ಕೆ ಹೋದಕೂಡಲೆ ಸ್ಫೂರ್ತಿಯುತ ರಣಗೀತೆಗಳನ್ನು ರಚಿಸಿ ಸ್ಪಾರ್ಟನರಲ್ಲಿ ರಣೋತ್ಸಾಹ ಹಗೂ ಪರಾಕ್ರಮಗಳನ್ನು ತುಂಬಿದನಂತೆ. ಯುದ್ಧದಲ್ಲಿ ಅದ್ಭುತವಾದ ಜಯ ಲಭಿಸಿದ ಸ್ಪಾರ್ಟನರು ಟರ್ಟೀಯಸ್‍ನನ್ನು ಅಭೂತಪೂರ್ವವಾಗಿ ಸನ್ಮಾನಿಸಿದರಂತೆ.

	ಈಗ ದೊರೆತಿರುವ ಈತನ ಕಾವ್ಯಭಾಗಗಳನ್ನು ನೋಡಿದರೆ ಆ ಸನ್ಮಾನಕ್ಕೆ ಈತ ಯೋಗ್ಯ ಎನಿಸದೆ ಇರದು. ಎಲಿಜಿ ಎಂಬ ಭಾವಗೀತಾ ಪ್ರಕಾರದಲ್ಲಿ ನಿಷ್ಣಾತರಾದ ಪ್ರಾಚೀನ ಗ್ರೀಕ್ ಕವಿಗಳಲ್ಲಿ ಎರಡನೆಯವನೆಂದು ಗೌರವಿಸಲ್ಪಡುವ ಟರ್ಟೀಯಸನ ಸಮರ ಗೀತೆಗಳನ್ನು ಎಷ್ಟೋ ಶತಮಾನಗಳ ಕಾಲ ಗ್ರೀಸಿನ ನಾನಾ ಕಡೆ ಯುದ್ಧಕ್ಕೆ ಸನ್ನದ್ಧರಾಗುವ ಸಮಯದಲ್ಲಿ ಹಾಡುವುದು ವಾಡಿಕೆಯಾಗಿತ್ತು. ಎಲಿಜಿ ಈಗ ಶೋಕಗೀತೆ ಎಂಬ ಪರಿಮಿತ ಅರ್ಥದಲ್ಲಿ ಬಳಕೆಯಲ್ಲಿದೆ. ಹಿಂದೆ ಯುದ್ಧ, ರಾಜಕಾರಣ, ಪ್ರಣಯಗಳಿಗೆ ಸಂಬಂಧಪಟ್ಟ ವಿಷಯಗಳೂ ಸಹ ಎಲಿಜಿಗೆ ವಸ್ತು ಆಗಬಹುದಾಗಿತ್ತು.

	ಟರ್ಟೀಯಸನ ಕೆಲವು ವೀರಾವೇಶ ತುಂಬಿದ ಸಮರಗೀತೆಗಳು, ಯೂನೋಮಿಯ (ಒಳ್ಳೆಯ ಸರ್ಕಾರ) ಎಂಬ ಕಾವ್ಯದ ಕೆಲವು ಭಾಗಗಳು ಉಪಲಬ್ಧವಿವೆ. ಎರಡನೆಯದರಲ್ಲಿ ಮೂರು ಪದ್ಯಗಳು ಸಂಪೂರ್ಣವಾಗಿಯೇ ಲಭಿಸಿವೆ. ಅವುಗಳಲ್ಲಿ ಕೆಲವು ಸಾಲುಗಳು ಅನ್ಯಪರಿಷ್ಕøತವೋ ಪ್ರಕ್ಷಿಪ್ತವೋ ಆಗಿರಬೇಕೆಂದು ಕಾಣುತ್ತದೆ. 

	ಈತನ ಗೀತೆಗಳನ್ನೂ ಕಾವ್ಯಭಾಗಗಳನ್ನೂ ಸಂಗ್ರಹಿಸಿ ಐದು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಅವುಗಳಲ್ಲಿ ಜೆ.ವಿ. ಫ್ರಾಂಕ್ ಎಂಬ ಅಭಿಜಾತ ವಿದ್ವಾಂಸ ಸಂಪಾದಿಸಿರುವ ಸಂಕಲನವೇ ಶ್ರೇಷ್ಠವಾದುದೆಂದು ಪರಿಗಣಿಸಲಾಗಿದೆ.			    (ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ